ಕಡಗೋಲ ಮುರುಗಲ : ಗಟ್ಟಿಫೆರೀ ಕುಟುಂಬದ ಗಾರ್ಸೀನಿಯ ಇಂಡಿಕ ಎಂಬ ವೈಜ್ಞಾನಿಕ ಹೆಸರಿನ ನಿತ್ಯಹರಿದ್ವರ್ಣದ ಮಧ್ಯಮ ಮಟ್ಟದ ಮರ. ಕೊಂಕಣದಿಂದ ಕೊಡಗಿನ ವರೆಗೂ ಹರಡಿರುವ ಈ ಮರವನ್ನು ಮಹಾರಾಷ್ಟ್ರ ರಾಜ್ಯದ ದಕ್ಷಿಣ ಜಿಲ್ಲೆಗಳಲ್ಲೂ ಬೆಳೆಸಲಾಗುತ್ತಿದೆ. ನೀಲಗಿರಿ ಬೆಟ್ಟದ ಸಾಲುಗಳಲ್ಲಿ ಇದು ಸಮೃದ್ಧವಾಗಿ ಬೆಳೆಯುತ್ತದೆ. ಇದನ್ನು eóÁಂಜಿûಬಾರಿನಿಂದ ಭಾರತಕ್ಕೆ ತಂದು ಬೆಳೆಸಲಾಗಿದೆಯೆಂದು ಹೇಳುವರು. ಈ ಮರದ ಕೊಂಬೆಗಳು ಜೋಲಾಡುತ್ತಿರುತ್ತವೆ; ಎಲೆಗಳು ದೀರ್ಘವೃತ್ತ ಅಥವಾ ಆಯಾಕಾರವಾಗಿದ್ದು ತುದಿಯಲ್ಲಿ ಮೊನಚಾಗಿವೆ. 2.5"-3.5" ಉದ್ದವಾಗಿಯೂ 1"-1.5" ಅಗಲವಾಗಿಯೂ ಇರುವ ಈ ಎಲೆಗಳು ಮೇಲ್ಭಾಗದಲ್ಲಿ ಹಚ್ಚಹಸಿರಾಗಿಯೂ ತಳಭಾಗದಲ್ಲಿ ಮಾಸಲು ಬಣ್ಣದವಾಗಿಯೂ ಇರುತ್ತವೆ. ನವೆಂಬರಿನಿಂದ ಫೆಬ್ರುವರಿ ತಿಂಗಳುಗಳಲ್ಲಿ ಮರ ಹೂ ಬಿಡುತ್ತದೆ. ಏಪ್ರಿಲ್-ಮೇ ವೇಳೆಗೆ ಬಲಿತು ಮಾಗುವ ಇದರ ಹಣ್ಣು ಗುಂಡಾಗಿ 1"-1.5" ವ್ಯಾಸವುಳ್ಳದ್ದಾಗಿದೆ. ಒಳಗಡೆ 5-8 ಬೀಜಗಳಿವೆ.

ಹಿತಕರವಾದ ರುಚಿಯಿಂದ ಕೂಡಿರುವ ಮುರುಗಲ ಹಣ್ಣಿನ ತಿರುಳನ್ನು ಪ್ರತ್ಯೇಕಿಸಿ ಒಣಗಿಸಿ ಹುಣಿಸೆಯ ಹಣ್ಣಿನ ಹುಳಿಗೆ ಬದಲಾಗಿ ಬಳಸುವರು. ಇದರಲ್ಲಿ ಶೇ. 10ರಷ್ಟು ಮ್ಯಾಲಿಕ್ ಆಮ್ಲವೂ ಅಲ್ಪಸ್ವಲ್ಪ ಟಾರ್ಟಾರಿಕ್ ಮತ್ತು ಸಿಟ್ರಿಕ್ ಆಮ್ಲಗಳೂ ಇವೆ. ಬೇಸಗೆಯ ಪಾನೀಯಗಳನ್ನು ತಯಾರಿಸುವುದಕ್ಕೂ ಇದನ್ನು ಬಳಸುವರು.

ಮುರುಗಲ ಹಣ್ಣನ್ನು ಅನೇಕ ಔಷಧಿಗಳಲ್ಲಿ ಬಳಸುವರು. ಅದರಲ್ಲಿರುವ ಮೇಲೆ ಸೂಚಿಸಿದ ರಾಸಾಯನಿಕ ಅಂಶಗಳು ರೋಗಕಾರಕ ಹುಳುಗಳನ್ನು ನಾಶ ಮಾಡುವ ಶಕ್ತಿ ಹೊಂದಿವೆ. ಇದನ್ನು ಹೃತ್ಚೇತಕ (ಕಾರ್ಡಿಯೋಟೋನಿಕ್)ವಾಗಿಯೂ ಮೊಳೆರೋಗ, ಆಮಶಂಕೆ, ಕೆಲವು ರೀತಿಯ ಹೃದ್ರೋಗಗಳು-ಇವುಗಳಲ್ಲೂ ಬಳಸುವುದುಂಟು. ಬೀಜಗಳನ್ನು ಬೇಯಿಸಿದಾಗ ತೇಲುತ್ತ ಮೇಲಕ್ಕೆ ಬರುವ ತುಪ್ಪದಂಥ ವಸ್ತುವನ್ನು ಪ್ರತ್ಯೇಕಿಸಿ ಕೋಕಂ ಬೆಣ್ಣೆ ಎಂಬ ಜಿಡ್ಡನ್ನು ತಯಾರಿಸುವ ಉದ್ಯೋಗ ಒಂದು ಗೃಹಕೈಗಾರಿಕೆಯಾಗಿ ಪ್ರಚಾರದಲ್ಲಿದೆ. ಉಂಡೆ ಅಥವಾ ಬಿಲ್ಲೆಗಳಾಗಿ ಮಾರಾಟವಾಗುವ ಈ ಬೆಣ್ಣೆಯನ್ನು ಹಲವರು ಅಡಿಗೆಗೆ ಬಳಸುತ್ತಾರೆ. ಸಾಮಾನ್ಯವಾಗಿ ಇದು ಹಳದಿ ಬಣ್ಣದ್ದಾಗಿ ಜಿಡ್ಡುಜಿಡ್ಡಾಗಿದೆ. ಈಚೆಗೆ ಇದನ್ನು ಶುದ್ಧಗೊಳಿಸಿ ಬಿಳಿಯ ಬಣ್ಣದಲ್ಲಿ ಮಾರಾಟಕ್ಕೆ ಇಡಲಾಗುತ್ತಿದೆ. ಈ ನೂತನ ರೂಪದಲ್ಲಿ ಇದು ಇತರ ವನಸ್ಪತಿ ತೈಲಗಳಂತೆ ಬಳಕೆಗೆ ಬರುತ್ತಿದೆ.

ಕೋಕಂ ಬೆಣ್ಣೆಯಲ್ಲಿ ಸ್ಪಿಯರಿಕ್ ಮತ್ತು ಓಲಿಯಿಕ್ ಆಮ್ಲಗಳೂ ಕೆಲವು ರೀತಿಯ ಗ್ಲಿಸರೈಡುಗಳೂ ಇವೆ. ದ್ರವೀಕರಣ ಬಿಂದು ತೀರ ಕಡಿಮೆಯಿದ್ದು ತಕ್ಕಷ್ಟು ಸ್ನಿಗ್ಧವಾಗಿರುವುದ ರಿಂದ ಇದನ್ನು ಪೆಪ್ಪರ್ಮಿಂಟ್ ತಯಾರಿಕೆಯಲ್ಲೂ ಮೋಂಬತ್ತಿ ಮತ್ತು ಸಾಬೂನಿನ ಉದ್ಯೋಗದಲ್ಲೂ ಬಳಸುವುದುಂಟು. ಇದರಿಂದ ತಯಾರಿಸಿದ ಸರಿಯನ್ನು ಹತ್ತಿ ಮತ್ತು ಉಣ್ಣೆಯ ದಾರಗಳನ್ನು ಬಲಗೊಳಿಸಲು ಸವರುವುದುಂಟು. ಇದರಿಂದ ತಯಾರಿಸಿದ ತೈಲ ಒಳ್ಳೆಯ ಪೋಷಕಾಂಶಗಳನ್ನೂ ಕೆಲವು ಬೇನೆಗಳನ್ನು ಶಮನಗೊಳಿಸಬಲ್ಲ ಔಷಧಾಂಶಗಳನ್ನೂ ಒಳಗೊಂಡಿದೆ. ಇದನ್ನು ಚರ್ಮ ಹದಮಾಡುವ ಕೈಗಾರಿಕೆಯಲ್ಲೂ ಮುಲಾಮುಗಳ ತಯಾರಿಕೆಯಲ್ಲೂ ಬಳಸುವರು ; ಹುಣ್ಣುಗಳಿಗೂ ಚರ್ಮದ ಬಿರಿತಕ್ಕೂ ಹಚ್ಚುವರು. ಬೀಜದಿಂದ ತೈಲ ತೆಗೆದ ಮೇಲೆ ಉಳಿಯುವ ಹಿಂಡಿ ಗೊಬ್ಬರವಾಗುತ್ತದೆ. (ಎ.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ